ಅಸ್‍ಪರ್ಯಾಗಸ್
ಲಿಲಿಯೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಆಹಾರವಾಗಿ, ಔಷಧಿಯಾಗಿ ಜನಪ್ರಿಯವಾಗಿದೆ. ಬಳಕೆಯಲ್ಲಿ ಇದಕ್ಕೆ ಶತಾವರಿ, ಮಜ್ಜಿಗೆಗೆಡ್ಡೆಗಿಡ, ಹಲವು ಮಕ್ಕಳ ತಾಯಿ ಎಂಬ ಕನ್ನಡ ಹೆಸರುಗಳಿವೆ. ಇದರ ಕೆಲವು ಪ್ರಭೇದಗಳು ಬಹಳ ಸುಂದರವಾಗಿರುವುದರಿಂದ ಉದ್ಯಾನವನಗಳಲ್ಲಿ ಕುಂಡ ಸಸ್ಯ, ಕಲ್ಲೇರಿ ಸಸ್ಯಗಳಾಗಿಯೂ ಮನೆಯಲ್ಲಿ ಅಲಂಕಾರ ಸಸ್ಯಗಳಾಗಿಯೂ ಬೆಳೆಸುತ್ತಾರೆ. ಕೆಲವು ಅಸ್‍ಪರ್ಯಾಗಸ್ ಉತ್ತಮ ಆಹಾರಾಂಶಗಳನ್ನು ಪಡೆದಿವೆ. ಇಂಥವುಗಳನ್ನು ದೀರ್ಘಾವಧಿ ತರಕಾರಿ ಸಸ್ಯಗಳಾಗಿ ಬೆಳೆಸಿ ಉಪಯೋಗಿಸುತ್ತಾರೆ. 

ಇದರಲ್ಲಿರುವ ಆಹಾರ ಅಂಶಗಳು ಈ ರೀತಿ ಇವೆ : ತೇವಾಂಶ 93%; ಜೀವಧಾತುಗಳು 2.2%;  ಮೇದಸ್ಸು 0.2 %;  ಬೂದಿ 0.6 %;  ಸುಣ್ಣ 0.21 %; ಶರ್ಕರಪಿಷ್ಟ 3.9 %;  ನಾರು 0.7%;  ಸಕ್ಕರೆ 1.3 %;  ಪಿಷ್ಟ 0.4 %;  ಕಬ್ಬಿಣ 0.0012 %;  ಶಕ್ತಿ (ಕೆಲೋರಿಗಳಲ್ಲಿ) 120.

ಅಸ್‍ಪರ್ಯಾಗಸ್ ಸಸ್ಯ ಮೆಡಿಟರೇನಿಯನ್ ಮತ್ತು ಏಷ್ಯಮೈನರ್ ದೇಶಗಳ ಮೂಲವಾಸಿ. ಇದರ ಉಪಯೋಗ 2000 ವರ್ಷಗಳಷ್ಟು ಪ್ರಾಚೀನವಾದದ್ದೆನ್ನಲಾಗಿದೆ. ಭಾರತದಲ್ಲಿ ಇದರ ಉಪಯೋಗ ಮತ್ತು ಬೇಸಾಯ ಇತ್ತೀಚೆಗೆ ಹೆಚ್ಚುತ್ತಿದೆ. ಅಸ್‍ಪರ್ಯಾಗಸ್ ಅಫಿಷಿನ್ಯಾಲಿಸ್ ಎಂಬುದನ್ನು ತರಕಾರಿಯಾಗಿ ಉಪಯೊಗಿಸುತ್ತಾರೆ. ಅ. ಅಸ್‍ಪರ್ಯಾಗೆರಾಯಡೀಸ್, ಅ. ಸ್ಕಂಡನ್ಸ್, ಅ. ಸ್ಪಿಂಗ್ರಿ, ಅ. ಪ್ಯಲಕೆಚಸ್, ಅ.ಕ್ರಿಸ್‍ಪಸ್, ಅ.ಪ್ಲೂಮೋಸಸ್, ಅ.ವಿರೆಗೇಟಸ್ ಮುಂತಾದ ಪ್ರಭೇದಗಳು ಸುಂದರವಾಗಿ ಕಾಣಿಸುವುದರಿಂದ ಅವನ್ನು ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಅಸ್‍ಪರ್ಯಾಗಸ್ ಸಸ್ಯ ಗುಪ್ತಕಾಂಡದಿಂದ ಬಹುವಾಗಿ ಕವಲೊಡೆದು ಧೃಡಕಾಂಡವನ್ನು ಕೊಡುತ್ತದೆ. ಕಾಂಡ ಕೊಳವೆಯ ಆಕಾರದ್ದು; ಉದ್ದ ಸುಮಾರು 15 ಸೆಂ.ಮೀ. ಹಸುರು ಬಿಳಿಯ ಗೆರೆಗಳನ್ನು ಹೊಂದಿರುತ್ತದೆ. ರೆಂಬೆಗಳು ಬುಡದಿಂದ ತುದಿಯವರೆಗೆ ಇರುತ್ತದೆ. ಎಲೆ ತೊಟ್ಟಿಲ್ಲದೆ ಸಣ್ಣ ಸೂಜಿಯಂತೆ ನೀಳ; ಅದರ ಅಂಚು ನಯ, ತುಸಿ ಮೊನಚು. ಎಳೆಯ ಎಲೆ ಹಸುರು; ಅನಂತರ ಹಳದಿ ಮಿಶ್ರಿತ ಹಸುರು ಆಗುವುದು. ಹೂ ಗೊಂಚಲು ಅಂಬೆಲ್ ಅಥವಾ ಸರಳ ರೆಸಿಮ್ ಮಾದರಿಯಲ್ಲಿರುವುದು. ಕೆಲವು ಸಾರಿ ಒಂಟಿ ಹೂವೂ ಇರುವುದುಂಟು. ಪುಷ್ಪಪಾತ್ರೆಯಲ್ಲಿ 6 ಕೂಡುಭಾಗಗಳಿದ್ದು ಎರಡು ವೃತ್ತಗಳಲ್ಲಿ ಹರಡಿವೆ. ಹೂವು ಗಂಟೆಯಾಕಾರದಲ್ಲಿರುತ್ತದೆ. ಆರು ಕೇಸರಗಳೂ ಮೂರು ಭಾಗಗಳಲ್ಲಿ ಶಲಾಕಾಗ್ರವೂ ಎರಡು ಅಥವಾ ಹೆಚ್ಚು ಅಂಡಗಳನ್ನೊಳಗೊಂಡ ಅಂಡಾಶಯವೂ ಇದೆ. ಫಲ ಬೆರ್ರಿ ಮಾದರಿಯದು. 

ಅಸ್‍ಪರ್ಯಾಗಸ್ ಸಸ್ಯವನ್ನು ಅನೇಕ ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಜೌಗನ್ನು ಇದು ಸಹಿಸುವುದಿಲ್ಲ. ಫಲವತ್ತಾಗಿರುವ ಮರಳುಗೋಡು ಮಣ್ಣಿನಲ್ಲಿ ಇದು ಸಮೃದ್ಧಿಯಾಗಿ ಬೆಳಯುತ್ತದೆ. ಇದು ದೀರ್ಘಕಾಲದ ಬೆಳೆಯಾದ್ದರಿಂದ ಇದರ ಬೇಸಾಯಕ್ಕೆ ಫಲವತ್ತಾದ ನೆಲವನ್ನೇ ಆರಿಸಬೇಕು. ಮತ್ತು ಅನಂತರವೂ ಅದರ ಸಾರವನ್ನು ಉಳಿಸಿಕೊಳ್ಳುವುದು ಅಪೇಕ್ಷಣೀಯ. 

	ಅಸ್‍ಪರ್ಯಾಗಸ್ ಸಸ್ಯ ಹೇರಳವಾಗಿ ಬೀಜ ಬಿಡುವುದರಿಂದ ಇದನ್ನು ಬೀಜಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು. ವಸಂತಕಾಲ ಸಸಿ ಬೆಳೆಸಲು ಯೋಗ್ಯಕಾಲ, ಎತ್ತರಿಸಿದ ಪಾತಿಗಳಲ್ಲಿ ಒಂದು ಮೀಟರ್ ಅಂತರದ ಸಾಲುಗಳಲ್ಲಿ ಬೀಜ ನೆಟ್ಟರೆ ಅವು ಸುಮಾರು ಒಂದು ತಿಂಗಳಲ್ಲಿ ಮೊಳಕೆಗೆ ಬರುತ್ತದೆ. ಒಂದು ವರ್ಷದ ಅನಂತರ ಸಸಿಗಳು ಸರಿಯಾಗಿ ಬೇರು ಬಿಟ್ಟು ತೋಟದಲ್ಲಿ ನೆಡಲು ಸಿದ್ಧವಾಗುತ್ತವೆ. ಸರಿಯಾಗಿ ಬೇರು ಬಿಡದ ಸಸಿಗಳು ತೋಟದಲ್ಲಿ ನೆಡಲು ಯೋಗ್ಯವಲ್ಲ.

	ಚೆನ್ನಾಗಿ ಉಳುಮೆ ಮಾಡಿ ಬೇಸಾಯ ಮಾಡಿದ ತೋಟದಲ್ಲಿ 2 ಮೀಟರ್ ಅಂತರದಲ್ಲಿ ಗುಂಡಿಗಳನ್ನು ತೆಗೆದು ಒಂದು ವರ್ಷದ ಸಸಿಗಳನ್ನು ನೆಡುವುದು ರೂಢಿಯಲ್ಲಿದೆ. ನೆಟ್ಟ ಮೂರು ವರ್ಷದ ಅನಂತರ ಬೆಳೆ ಕೊಯ್ಲಿಗೆ ಬಂದು ಯೋಗ್ಯರೀತಿಯಲ್ಲಿ ಕಾಪಾಡಿದರೆ 10 ವರ್ಷಗಳವರೆಗೆ ಮುಂದುವರಿಯುತ್ತದೆ. ಎಳೆಯ ಕುಡಿಗಳನ್ನು ಮಾತ್ರ ಕೊಯ್ಯಬೇಕು. ಬಲಿತ ಕುಡಿಗಳು ತಿನ್ನುವುದಕ್ಕೆ ರುಚಿಯಾಗಿರುವುದಿಲ್ಲ. ಎಕರೆಗೆ 3500 ಕೆ.ಜಿ ಗಳಷ್ಟು ಕುಡಿಗಳು ವರ್ಷಕ್ಕೆ ಸಿಕ್ಕುತ್ತವೆ.

	ಅಸ್‍ಪರ್ಯಾಗಸ್ ಸಸ್ಯ ರೋಗಕೀಟಗಳಿಗೆ ಸುಲಭವಾಗಿ ತುತ್ತಾಗುವುದಿಲ್ಲ. ಆದರೆ ಕೆಲವು ಸಾರಿ ತುಕ್ಕು ಬೂಷ್ಟು ರೋಗವೂ (ರಸ್ಟ್) ಸೊರಗು ರೋಗವೂ (ವಿಲ್ಟ್) ಕಾಣಿಸಿಕೊಳ್ಳುತ್ತವೆ. ಚಿಪ್ಪಿನ ಹುಳುಗಳು, ಸಾವಿರ ಕಾಲು ಕೀಟಗಳು ಇದನ್ನು ಅಪರೂಪಕ್ಕೆ ಕಾಡುವುದುಂಟು.											
(ಡಿ.ಎಂ.)
										(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ